ಅಸ್ತವ್ಯಸ್ತ



ನೀನು ಅರಳಿದ ಮೊಗ್ಗು, ಹಕ್ಕಿ ಹಾಡಿನ ಇಂಪು
ನಕ್ಷತ್ರಗಳ ಚೆಲ್ಲಿ ಹೋದ ಕವಿತೆ ;
ನಿದ್ದೆಯೂ ನೀನೆ, ಕನಸೂ ನೀನೆ ಇರುಳಿನಲಿ
ಅರ್ಥವಾಗದು ನನಗೆ ನಿನ್ನ ಪ್ರಶ್ನೆ.

ಹಸಿದ ಮಕ್ಕಳ ಕಣ್ಣನೀರು ನಿನ್ನಯ ಕವಿತೆ,
ಉಸಿರು ಕಟ್ಟುವೆ ಏಕೆ ಅದನು ಕೇಳಿ;
'ನೀರ ಬೆರಸದೆ ಹಾಲು ಮಾರುವುದೆ'? ಎನ್ನುವೆಯ,
ಅಂಥವರು ನಿನಗೆಲ್ಲಿ ಸಿಕ್ಕಬಹುದು ?

ನೀರು ಬೆರೆಸಿದ ಹಾಲು ಕುಡಿದು ಬೆಳೆದಿದೆ ಕಂದ,
ನೀರು ಬೆರಸದ ಹಾಲು ನಿನ್ನ ಕವಿತೆ ;
ಟೀಕೆ ಟಿಪ್ಪಣಿಗಳಿಗೆ ಬಲಿದೂರ ನೆಲಸಿಹುದು,
ತಂಬೆಲರ ನುಡಿಯಲ್ಲು ಅರ್ಥವಿರಬಹುದು.

ಬರಿಮೈಯ ಹೆಣ್ಣು ಪೀತಾಂಬರದ ಗೀತವನು
ಹಾಡುತ್ತ ಬರುತಿಹಳು ಬೀದಿಯಲ್ಲಿ ;
ಬದುಕು ಅಸ್ತವ್ಯಸ್ತ ; ಗುರಿ ದಾರಿಗಳ ನಡುವೆ
ಕಂದಕಗಳಿರುವುದನು ನಾನು ಬಲ್ಲೆ.

ನಿನ್ನ ತೂಕಡಿಕೆಯನು ನಾನೀಗ ಕಂಡಿಹೆನು,
ನಿನ್ನ ಕೋಣೆಗೆ ಹೋಗಿ ಮಲಗು ನಲ್ಲೆ!

         - ಕೆ ಎಸ್ ನರಸಿಂಹಸ್ವಾಮಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....