ನಾವು ಬರತೇವಿನ್ನ......


              ೧

ನಾವು ಬರತೇವಿನ್ನ ನೆನಪಿರಲಿ ತಾಯಿ
ನಂ ನಮಸ್ಕಾರ ನಿಮಗ,
ಕಾಯ್ದಿರಿ—ಕೂಸಿನ್ಹಾಂಗ ನಮಗ—
ನಾವು ಬರತೇವಿನ್ನ

ಜಗದ ಕೂಡ ಬಂದೆವು ಜಗಳಾಡಿ
ಕೊಟ್ಟಿರಿ ನಿಮ್ಮ ತೊಡಿ
ಅಲ್ಲಿ ನಿದ್ದಿ ಮಾಡಿ—ಎದ್ದೆವೀಗ
ಯಾವುದೋ ಹೊಸಾ ನಸುಕಿನ್ಯಾಗs |

ನೀವು ತಾಯಿತನ ನಡಿಸಿದರಿ
ಹಾಲ ಕುಡಿಸಿದರಿ
ಮರಳು ಆಡಿಸಿದರಿ ಕನಸಿನ್ಯಾಗ
ಬೆಳಗು—ಆತು ಭಾಳ ಬ್ಯಾಗ

ಕಣ್ಣು ಮುಚ್ಚಿಕೊಳ್ಳತಾವ ಚಿಕ್ಕಿ
ಚಿವುಗುಡತಾವ ಹಕ್ಕಿ
ಕತ್ತಲಿ ತಲಿಕುಕ್ಕಿ—ಬಾನಮ್ಯಾಗ
ಬೆಳಕು—ಹಾರ್ಯಾವ ಮೂಡಲದಾಗ

ನಿಮ್ಮ ಸೆರಗ ಮರೀ ಮಾಡಿದಿರಿ
ಲಾಲಿ ಹಾಡಿದಿರಿ
ಆಟ ಆಡಿದಿರಿ—ಏನೋ ಹಾಂಗs
ಮರೆತೆವು—ಕಳೆದ ಜನ್ಮಧಾಂಗ

ಜೋಲಿ—ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು—ಲೋಕದಾಗ ?
ನಾವು -- ಮರತೇವದನ ಹ್ಯಾಂಗ ?

ಅಕ್ಕ—ತಂಗಿ—ಮಗಳು –ಹಡೆದ ತಾಯಿ…
ಕನ್ನಿ—ಗೆಳತಿ—ಮಡದಿ—ದಾಯಿ—ಸಾಕುದಾಯಿ…
ಜೋಡೆ—ಸೂಳೆ ಮತ್ತೆ ಮಾಯಿ—ವಿಧೀಮಾಯಿ…

ನೂರಾರು ವೇಷ ಕಳಿಸಿದಿರಿ
ಮಡ್ಡ ಇಳಿಸಿದಿರಿ
ಮಾನ ಬೆಳಿಸಿದಿರಿ

ಯಾಕೋ ಕರುಣ ಬಂತು ತಮಗs
ನಾವು—ಶರಣ ಬರಲಿಲ್ಲ ಸುಮಗs

ನಾವು ಬರತೇವಿನ್ನ......

           ೨

ಎಲ್ಲಿ ಹೋದಲ್ಲಿರಲಿ ನಮ್ಮ ಹತ್ರ
ನಿಮ್ಮ ಕೃಪಾ ಛತ್ರ
ಕಾರ್ಯ ಸುಸೂತ್ರ—ನಡೀತಿರಲಿ
ನಿಮ್ಮ—ಹೆಜ್ಜೆ ಜೋಡಿಗಿರಲಿ

ಹಗಲಾಗಲಿ ಧುರಂಧುರಿ ಜಾತ್ರಿ
ನಿದ್ದಿಗಿರಲಿ ರಾತ್ರಿ
ಜೀವಕ್ಕs ಖಾತ್ರಿ—ನಿಮ್ಮದಿರಲಿ
ಜನ್ಮ ಮರಣ, ಏನs ಬರಲಿ

ಮಾಡೀತೇನು ಮಣ್ಣಿನs ಗೊಂಬಿ ?
ನಿಮ್ಮ ಹೆಸರ ನಂಬಿ
ಹೊತ್ತುಕೊಂಡು ಕಂಬಿ—ಕುಣಿಯುತಿರಲಿ
ಸ್ವರ್ಗ—ನರಕ ಯಾವುದೂ ಇರಲಿ ?

ಮೂರು ಹೊತ್ತಿನ್ಯಾಗ ನಿಮ್ಮ ಧ್ಯಾನ
ಹೊತ್ತುತಿರಲಿ ಗ್ಯಾನ
ಸುಡಲಿ ಅಜ್ಞಾನ-ಪ್ರೇಮ ಮುರಲಿ
ಕಿವಿಗೆ ಅದೇ ಕೇಳಸತಿರಲಿ.

ನಿಮ್ಮ ಚಂದ್ರ ಜ್ಯೋತಿಯಾ ಬೆಳಕು
ಅದs ನಮಗ ಬೇಕು
ಸುಡೋ ಸೂರ್ಯ ಸಾಕು—ಯಾಕ ತರಲಿ ?
ಹೊತ್ತಾರ ಯಾರು ಒಣಾ ಹರಲಿ !

ಕತ್ತಲೀ ಕೆಚ್ಚ ಕೆದರೀ—ಕೆಚ್ಚಿ ಕೆದರಿ !
ಬಣ್ಣ ಬಣ್ಣ ಬಂತು ಚೆದರಿ—ಸುತ್ತ ಚೆದರಿ
ಮಕ್ಕಳಾಟ ತೋರಿಸಿದಿರಿ—ಹಾರಿಸಿದಿರಿ.

ನಿಮ್ಮ ಹೊಟ್ಟೀ ಕರುಳಿನಾ ತುಣುಕು
ಅಂತನs ಚುಣುಕು
ತೋರಿಸಿದಿರಿ ಮಿಣುಕು

ಮಿಣುಮಿಣುಕು ದೀಪದಾಗ
ಚಿಕ್ಕೀ ಮಳೀ ಸುರಿಸಿದ್ಹಾಂಗ |

ನಾವು ಬರತೇವಿನ್ನ....

                         - ದ ರಾ ಬೇಂದ್ರೆ
      ('ಮೂರ್ತಿ ಮತ್ತು ಕಾಮಕಸ್ತೂರಿ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....