ದ್ವಂದ್ವಯುದ್ಧ


ದ್ವಂದ್ವಯುದ್ಧದ ಜಗವಿದು, - ಇಬ್ಬರು ಜಟ್ಟಿಗಳು ಕೂಡಿ
ಒಬ್ಬರೊಬ್ಬರ ಸಾವಿಗಾಗಿ ಸಮರದಲಿ ಹೋರಾಡುತಿಹರು.
ಗೆದ್ದವನೇ ಎದ್ದ. ಬಿದ್ದವನೇ ಬಿದ್ದ.
ಗೆದ್ದವನ ಕುಲಕೋಟಿಯೆಲ್ಲ ಉದ್ಧಾರವಾಯ್ತು. 
ಬಿದ್ದವನಿಗೆ ಇದ್ದುಬಿದ್ದವರು, - ಗತಿಗೆಟ್ಟರು ಇದ್ದುಬಿದ್ದಲ್ಲಿ.
ಇಬ್ಬರ ಸೋಲು-ಗೆಲವು ತೂಗುವವು ಮೂಲೋಕದ ದೈವವನ್ನು.

ಜಟ್ಟಿಗಳು ಮಾನವರಲ್ಲ, - ಪ್ರಮೇಯಗಳೆರಡು. ಎರಡು ತತ್ವಗಳು!
ಹದ್ದನ್ನು ಹದ್ದು ಕಾಡಿದಂತೆ ಬೆನ್ನತ್ತುವವು ವಾಯುಲೋಕದಲ್ಲಿ.
ಹೋರಾಡುವವು ವಾರಿಧಿಯಲ್ಲಿ, - ತಿಮಿಂಗಿಲವು ತಿಮಿಂಗಿಲದೊಡನೆಯಂತೆ.
ಈ ಕಲ್ಪನೆಗಳ ಕಾದಾಟಕ್ಕೆ ಕಂಪಿಸಿತ್ತು ಜಗವೆಲ್ಲ;
ರಕ್ತದ ಕಾಲುವೆ ಹರಿಯಿತು; ಕೋಟಿ ನಾರಿಯರ ಕುಂಕುಮವಳಿಸಿತು;
ಆದರೆ ಮುಗಿದಿಲ್ಲ ತತ್ವಗಳ ತುಮುಲ ಯುದ್ಧ!

ಕಲ್ಪನೆಗಳಾವುವು ಗೊತ್ತೇ?
ಇದ್ದುದ್ದೇ ಇರಬೇಕೆಂಬ ಗೊಂದಲ, ಹೊಸತೊಂದು ಬರಬೇಕೆಂಬ ಹಂಬಲ;
ಶ್ರೀಮಂತರದಿರಬೇಕೆಂಬ ಕಸಿವು, ಶ್ರೀಮಂತರು ಸಾಯಬೇಕೆಂಬ ಹಸಿವು.
ಸಾಮ್ರಾಜ್ಯದ ಮಬ್ಬು, ಸ್ವಾತಂತ್ರ್ಯದ ಉಬ್ಬು;
ಬಿಳಿದೊಗಲಿನ ಕುಣಿತಕ್ಕೆ ಕರಿದೊಗಲು ಮಣಿದಿರಬೇಕೆಂಬಾಸೆ,   
ಕರಿಬಿಳಿದರ ಭೇದವನಳಿಸಿಬಿಡಬೇಕೆಂಬ ಭಾಷೆ;
ಉಳಿದವರ ಸುಖವೆಲ್ಲಾ ನನ್ನ ಸುಖಕ್ಕೆ ಬರಿ ಸವುದೆಯೆಂಬ ಭಾವ,
ವಿಶ್ವದ ಸುಖವೇ ವ್ಯಕ್ತಿಯ ಸುಖವೆನಿಸಬೇಕೆಂಬ ಹೇವ;
ಬಡವರ ಬಾಳ್ವೆಯನ್ನು ಹಿಂದಿ ಹಿಪ್ಪೆಯಾಗಿಸುವ ನೇತಿ,
ಹಣವಿದ್ದವರ ಹೆಣ ಕೆಡವಬೇಕೆಂಬ  ರೀತಿ -
ಉಯ್ಯಲೆಯಾಡುವುದು ಜಗತ್ತು, ಶಕ್ತಿಗಳೆರಡು ಜೀಕುವಲ್ಲಿ;
ಸ್ನೇಹತಂತುಗಳು ಹರಿದವು, ಮಣಿಯು ಕಳಚಿ ಬಿತ್ತು;
ಉರುಳಿ ಬೀಳುವದೆ ಮರವು? ಹೊರಳಿ ಹೊಗುವುದೆ ಜಗತ್ತು?

                                  - ವಿ ಕೃ ಗೋಕಾಕ್
                       ('ಬ್ರಿಟನ್ನಿನ ದ್ವೀಪದಲಿ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....